ಗಮಕಿ ಶಂಕರ ನಾರಾಯಣ‍

ಆರ್ ಶಂಕರನಾರಾಯಣ್ ಅವರು ರಾಚಮಾನಹಳ್ಳಿ ಶ್ರೀ ವೆಂಕಟರಾಮಯ್ಯ ಮತ್ತು ಶ್ರೀಮತಿ ರುಕ್ಮಿಣಿಯಮ್ಮ ಎಂಬ ಸಂಪ್ರದಾಯಸ್ಥ ಮನೆತನದ ದಂಪತಿಗಳಿಗೆ 15.02.1931ರಂದು ಜನಿಸಿದರು. ಚಿಕ್ಕಂದಿನಿಂದಲೇ ಶೈಕ್ಷಣಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತ ವ್ಯಕ್ತಿತ್ವವನ್ನು ರೂಢಿಸಿಕೊಂಡವರು. ಮುಂದೆ ಭಾರತೀಯ ದೂರವಾಣಿ ಕಾರ್ಖಾನೆ (I T I) ಯಲ್ಲಿ ಉದ್ಯೋಗಿಯಾಗಿ , ಕಾರ್ಖಾನೆಯಲ್ಲಿ ಕನ್ನಡ ವಾತಾವರಣ ಅಭಿವೃದ್ಧಿಗಾಗಿ  ತಮಿಳ್ ಮಂಡ್ರಮ್ ಹಾಗೂ ಕೇರಳ ಸಮಾಜಂ ಗಳಲ್ಲಿ ಸಾವಿರಾರು ಮಂದಿ ಕನ್ನಡೇತರರಿಗೆ ಕನ್ನಡ ತರಗತಿಗಳನ್ನು ನಡೆಸಿದರು.

ಗುರುಗಳು‍

ಗಮಕಿ ಹು ರಾಮರಾಧ್ಯರು ಗಮಕ ಗುರುಗಳಾಗಿ ಇವರ ಭಾವರಾಗ ಜ್ಞಾನವನ್ನು ವೃದ್ಧಿಪಡಿಸಿದರು. ಅಲ್ಲದೇ ವಿದ್ವಾನ್ ಗೋಪಾಲಕೃಷ್ಣರಾಯರಿಂದ ಪಿಟೀಲು ವಾದನವನ್ನು, ವಿದ್ವಾನ್ ಹಾವೇರಿ ಪ್ರಹ್ಲಾದಾಚಾರ್ಯ ಅವರಲ್ಲಿ ಸಂಗೀತಾಭ್ಯಾಸ ನಡೆಸಿದರು. ಮುಂದೆ, ಗಮಕಿ ಜಿ ಅನಂತಪದ್ಮನಾಭಯ್ಯ ಮತ್ತು ಗಮಕಿ ಎಂ ರಾಘವೇಂದ್ರರಾವ್ ಅವರಲ್ಲಿ ಕಾವ್ಯವಾಚನದ ಸೂಕ್ಷಮಾoಶಗಳ ಪರಿಚಯವಾಯಿತು.

ಗಮಕ ಕಲೆಗೆ ಅವಶ್ಯವಾದ ಸಾಹಿತ್ಯಾಭ್ಯಾಸವನ್ನು, ದಿಬ್ಬೂರು ಶ್ರೀನಿವಾಸರಾಯರು, ರಾಮಚಂದ್ರಶರ್ಮ ತ್ಯಾಗಲಿ, ಎನ್ ವಿ ಅನಂತರಾಮಯ್ಯ, ಪ್ರೊ. ಟಿ ಕೇಶವ ಭಟ್ಟ ಅವರಲ್ಲಿ ಅಭ್ಯಾಸ ಮಾಡಿದರು. ಅಲ್ಲದೇ ತಮ್ಮ 48ನೇ  ವಯಸ್ಸಿನಲ್ಲಿ  ಕನ್ನಡದಲ್ಲಿ  ಎಂ ಎ ಪದವಿಯನ್ನು ಪಡೆದರು. ಈ ಎಲ್ಲ ವಿಶೇಷ ಅಭ್ಯಾಸಗಳಿಂದಾಗಿ ಶಂಕರನಾರಾಯಣ್ ಅವರು ಕಾವ್ಯವಾಚನ ಮತ್ತು ಕಾವ್ಯರಚನೆಗಳಲ್ಲಿ ತೊಡಗಿಸಿಕೊಂಡರು. 

‍ಕನ್ನಡ ಕಾವ್ಯ ಸಾಹಿತ್ಯ ಹಾಗೂ ಗಮಕ ಕಲೆಯ ಪ್ರಚಾರ

ತಮ್ಮ ತಂದೆತಾಯಿಯರ ಆಶಯದಂತೆ, 1964ರಲ್ಲಿಕಾವ್ಯ ಪ್ರಚಾರ ಮಂಡಳಿಎಂಬ ಸಂಸ್ಥೆಯನ್ನು ಸ್ಥಾಪಿಸಿ, ಸುಮಾರು  25 ವರ್ಷಗಳ ಕಾಲ ಕನ್ನಡ ಕಾವ್ಯ ಸಾಹಿತ್ಯ ಹಾಗೂ ಗಮಕ ಕಲೆಯ ಪ್ರಚಾರ ಕೈಗೊಂಡರು. ಶಂಕರನಾರಾಯಣ್ ಅವರು ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರೂ ಆಗಿದ್ದರು

ಇವರು ತಮ್ಮ ಕಾವ್ಯ ಕೃಷಿಯಲ್ಲಿ, ಕವನ ಸಂಕಲನಗಳು, ವಿಚಾರ ಪ್ರಬಂಧಗಳು, ಷಟ್ಪದಿ ಕಾವ್ಯಗಳನ್ನು ರಚಿಸಿದ್ದಾರೆ. ಇವರ ಎಲ್ಲ ಕೃತಿಗಳ ಮಕುಟಮಣಿಯಾಗಿಭೀಮಸೇನ ವಿಜಯಹಾಗೂಶ್ರೀ ಸೀತಾದರ್ಶನಂಎಂಬ ಸಾವಿರಕ್ಕೂ ಮೀರಿದ ಪದ್ಯಗಳಿಂದ ಕೂಡಿದ ಬೃಹತ್ ಕಾವ್ಯಗಳು ಇವರ ಕಾವ್ಯಾನುಭವದ ಪೂರ್ಣ ಫಲ ಎಂದೇ ಹೇಳಬಹುದು.

‍ಪ್ರಶಸ್ತಿ ಹಾಗೂ ಪುರಸ್ಕಾರ

ಶಂಕರನಾರಾಯಣ್ ಅವರ ಗಮಕ ಕಲಾ ಸೇವೆಯನ್ನು ಪರಿಗಣಿಸಿ, ಕರ್ನಾಟಕ ಸಂಗೀತನೃತ್ಯ ಅಕಾಡೆಮಿಯಕರ್ನಾಟಕ ಕಲಾಶ್ರೀಪ್ರಶಸ್ತಿಯನ್ನು 2001ರಲ್ಲಿ ನೀಡಲಾಗಿದೆ.

ಗಮಕ ಶಂಕರ ಪ್ರತಿಷ್ಠಾನ

ಗಮಕಿ ಆರ್ ಶಂಕರನಾರಾಯಣ್ ಅವರ ನೆನಪಿನಾರ್ಥ “ಗಮಕ ಶಂಕರ ಪ್ರತಿಷ್ಠಾನ “ ಎಂಬ ಸಂಸ್ಥೆ ಸ್ಥಾಪಿಸಲಾಗಿದ್ದು, ಕನ್ನಡ ನಾಡು-ನುಡಿ-ಕಲೆ-ಸಂಸ್ಕೃತಿ ಗಳಲ್ಲಿ ಜನತೆಯ ಆದರಾಭಿಮಾನವನ್ನು, ಆಸಕ್ತಿಯನ್ನು ಬೆಳೆಸುವುದು ಈ ಸಂಸ್ಥೆಯ ಉದ್ದೇಶ.

‍ಕುಟುಂಬ ಪರಿಚಯ

ಶ್ರೀಯುತ ಶಂಕರನಾರಾಯಣ್ ಅವರ ಧರ್ಮ ಪತ್ನಿ ಶ್ರೀಮತಿ ಇಂದಿರಾ, ಗೃಹಿಣಿಯಾಗಿದ್ದು, ಪತಿಯ ಸಾಹಿತ್ಯ ಕೃಷಿಗೆ ಬೆನ್ನೆಲುಬಾಗಿದ್ದವರು. ಇನ್ನು ಇವರೀರ್ವರಿಗೆ ಒಬ್ಬ ಪುತ್ರ, ಶ್ರೀ ಗುರುಪ್ರಸಾದ್ ಅವರು ಹಾಗು ಸೊಸೆ ಶ್ರೀಮತಿ ಸುಮಾ. ಇವರ ಮೊಮ್ಮಕ್ಕಳು, ಪವನ್ ಕುಮಾರ್ ಮತ್ತು ಸಂಪದಾ.

ಶ್ರೀಮತಿ ಇಂದಿರಾ ಅವರ ವ್ಯಕ್ತಿ ಚಿತ್ರಣ, ಈ ವೀಡಿಯೊದಲ್ಲಿ ಪ್ರಸ್ತುತ ಪಡಿಸಲಾಗಿದೆ. 

ಇವರ ಸೊಸೆ ವಿದುಷಿ ಸುಮಾ ಪ್ರಸಾದ್ , ಸಂಗೀತದಲ್ಲಿ ವಿದುಷಿಯಾಗಿದ್ದು , ಗಮಕದಲ್ಲೂ ಪಾರೀಣ್ಯತೆಯನ್ನು ಪಡೆದಿದ್ದಾರೆ. ಪ್ರಸ್ತುತ ನಾಡಿನ ಹೆಸರಾಂತ ಗಮಕ ಕಲಾವಿದೆಯಾಗಿದ್ದು, ಇವರ ಹಲವಾರು ಕಾರ್ಯಕ್ರಮಗಳು ನಾಡಿನ-ಹೊರನಾಡಿನ ಹಲವಾರು ಸ್ಥಳಗಳಲ್ಲಿ ಹಾಗೂ ಆಕಾಶವಾಣಿಕ್, ದೂರದರ್ಶನ ವಾಹಿನಿಗಳಲ್ಲಿ ನಡೆದಿವೆ.

ಇವರ ಮೊಮ್ಮಗಳು, ಸಂಪದಾ , ಸಂಗೀತ ಹಾಗು ಭರತನಾಟ್ಯ ಕಲಾವಿದೆ.